Thursday, 27 October 2022

ಹಳ್ಳಿಯ ಕಡೆಯ ಜನ

ಎಲ್ಲಿ ಹೋದರು ಅವರು
ನಮ್ಮ ಮನೆಯ ಎತ್ತುಗಳಿಗೆ
ಲಾಳಾ ಕಟ್ಟಿ ಹೊಡೆದವರು
ಚಳ್ಳಾ ತೊಟ್ಟು ಬಂದವರು

ಎಲ್ಲಿ ಹೋದರು ಅವರು
ನಮ್ಮ ಮನೆಯ ಪಾತ್ರೆ-ಪಗಡೆಗಳಿಗೆ
ಕಲಾಯಿ ಮಾಡಿದವರು
ಇದ್ದಿಲ ಹೊಲೆ ಮಾಡಿ ಸುಟ್ಟವರು

ಎಲ್ಲಿ ಹೋದರು ಅವರು
ನಮ್ಮ ಮನೆಯ ರುಬ್ಬುವ, ಬೀಸುವ
ಕಲ್ಲುಗಳಿಗೆ ಹುಳಿ ಹಾಕಿದವರು
ಸುತ್ತಿಗೆಯಲಿ ಹೊಡೆದವರು

ಎಲ್ಲಿ ಹೋದರು ಅವರು
ನಮ್ಮ ತೋಟದ ಹುಣಸೆ-ಮಾವಿನ
ಮರದಿಂದ ಹಣ್ಣು ಇಳುವಿದವರು
ತಲುಪಿನ ಕಡ್ಡಿ ಹಿಡಿದು ಬಂದವರು 

ಎಲ್ಲಿ ಹೋದರು ಅವರು
ಬಿರು ಬೇಸಿಗೆಯಲ್ಲಿ ನಮ್ಮೂರಿಗೆ ಬಂದು
ಐಸ್ ಕ್ಯಾಂಡಿ ಮಾರಿದವರು
ಬೈಸ್ಕಲ್ಲಿನಲ್ಲಿ ಊರೂರು ಸುತ್ತಿದವರು

ಎಲ್ಲಿ ಹೋದರು ಅವರು
ನಮ್ಮ ಮನೆಯ ಹಾಸಿಗೆ, ದಿಂಬುಗಳಿಗೆ
ಹತ್ತಿ ತುಂಬಿ ಕೊಟ್ಟವರು
ದೊಣ್ಣೆ ಹಿಡಿದು ಬಂದವರು

ಎಲ್ಲಿ ಹೋದರು ಅವರು
ಚೂರಿ ಚಾಕು ಕುಡುಗೊಲುಗಳಿಗೆ
ಸಾಣೆ ಹಿಡಿದವರು ....   
ಕುಲುಮೆ ಮಾಡಿ ಹೊಡೆದವರು... 

Monday, 13 October 2008

ಮುಸ್ಸಂಜೆಯ ಹನಿಗಳು


ದಿನವೊಂದರ ಸಂಜೆ ಐದರಲ್ಲಿ
ಆಗಸದ ತುಂಬೆಲ್ಲಾ ಮೋಡಗಳಾವರಿಸಿ
ಕಾರ್ಮೋಡವೊಂದು ಕರಗಿ
ಮುತ್ತಿನಹನಿಗಳು ಸುರಿದು
ಜಗವೊಂದು ಕ್ಷಣ ಸ್ತಬ್ದವಾಗಿರಲು
ಕರಗಿದ ಮೋಡದಂಚಿನಿಂದ ರವಿಇಣುಕಿದ
ಮುತ್ತಿನ ಮಳೆಹನಿಯ ಸಾಲು ಸಾಲೊಳಗೆ
ಹೊಳೆವ ಸೂರ್ಯನ ಬಿಸಿಲುಕೋಲೊಂದು ತೂರಿ
ತೆಳುನೀಲಿ ಬಾನಂಗಳದಲ್ಲಿ ಮೂಡಿತೊಂದು ಕಾಮನಬಿಲ್ಲು. ೧

ಇದಲೆಕ್ಕಿಸದೆ ಮೋಡ ಕರಗಿರಲು
ರವಿ ಇಣುಕುತಿದ್ದ ಧರಣಿಯತ್ತ
ಕಾಲ ಬಂದೆರಗಿ ರವಿಯ ಜಗ್ಗುತಿದ್ದ
ಪಡುವಣದಿ ಬಾನಿಳೆ ಸಂಧಿಸುವತ್ತ
ಇತ್ತ ಧರೆಯಲ್ಲಿ ಮುತ್ತಿನ ಹನಿಗಳು
ಕೆಸರಲ್ಲಿ ಕರಗಿ ಮತ್ತೆ ಒಂದಾದವು
ಮುಂಗಾರಿನ ಮೊದಲ ಮಳೆಯಲ್ಲಿ ಮಿಂದು
ಭೂತಾಯಿಯ ಹಸಿಮೈ ಕಂಪು ಸೂಸಿರಲು
ಉದ್ದೀಪನಗೊಂಡು ಉಲ್ಲಾಸದಿ ಜೀಕಿತೊಂದು ಹುಲ್ಲುಗರಿಕೆ. ೨

ಹಳ್ಳಿಯ ಕಡೆಯ ಜನ

ಎಲ್ಲಿ ಹೋದರು ಅವರು ನಮ್ಮ ಮನೆಯ ಎತ್ತುಗಳಿಗೆ ಲಾಳಾ ಕಟ್ಟಿ ಹೊಡೆದವರು ಚಳ್ಳಾ ತೊಟ್ಟು ಬಂದವರು ಎಲ್ಲಿ ಹೋದರು ಅವರು ನಮ್ಮ ಮನೆಯ ಪಾತ್ರೆ-ಪಗಡೆಗಳಿಗೆ ಕಲಾಯಿ ಮಾಡಿ...