Thursday, 5 October 2017

ಗಂಗೆಯೇ ಬತ್ತುತ್ತಿರುವಾಗ ಬರಡು ನೆಲದಲ್ಲೂ ಜೀವ ಒಸರಬಲ್ಲ ಅಸಲಿ ಕಾವ್ಯದ ಹನಿಗಳು : ರಾಮು ಕವಿತೆಗಳು

ಪ್ರಕೃತಿ ಪ್ರಕಾಶನ ಬಳಗ ಇಲ್ಲಿನ ಕವಿತೆಗಳ ಬಗ್ಗೆ ಮುನ್ನುಡಿಯಲ್ಲಿ ಒಂದು ಮಾತು ಹೇಳಿದೆ : "ಒಂದು ಅನುಭವವನ್ನು ವಿವರಿಸಲು ಕವಿತೆಯನ್ನು ಅವಲಂಬಿಸದೆ, ಅನುಭವವೇ ಕವಿತೆಯಾಗಲು ಮತ್ತು ಆ ಮೂಲಕ ಕವಿತೆಯೇ ಅನುಭವವಾಗಲು ಈ ಕವಿತೆಗಳು ಹಂಬಲಿಸುತ್ತವೆ".

ಈ ಕವಿಯ ಜೊತೆ ಜಗಳ ಸಾಧ್ಯವೇ ಇಲ್ಲ. ಏಕಾಂತದಲ್ಲಿ ತನ್ಮಯತೆಯಲ್ಲಿ ನಿಮ್ಮ ಒಳಗೇ ಓದಿಕೊಳ್ಳುತ್ತಾ ಅನುಭವಿಸುತ್ತಾ (ಸರಿಯಾದ ಪದ ಸವಿಯುತ್ತಾ) ಮತ್ತೆ ಮತ್ತೆ ನಿಮ್ಮೊಳಗೇ ಹೇಳಿಕೊಳ್ಳುತ್ತಾ ಹೋಗುತ್ತೀರಿ. ಕಾವ್ಯದ ಓದಿನ ಧನ್ಯತೆ ಪಡೆಯುತ್ತೀರಿ.

ನನ್ನ ಗುರುಗಳಾದ ಶೇಖರಪೂರ್ಣ ಹೇಳಿದ ಹಾಗೆ  : "ತುಂಬಾ ಒಳ್ಳೆಯ ಕೃತಿಗಳು ನಮ್ಮನ್ನು ಸುಸ್ತು ಹೊಡೆಸಿಬಿಡುತ್ತವೆ" ತರಹದ ಅನುಭವ ಇವತ್ತು ನನಗಾಯಿತು.

ಅನನ್ಯ ಅಸಾಧಾರಣ ವಿವರಗಳಿಂದ ನಮ್ಮ ಬುದ್ಧಿಮತ್ತೆಯನ್ನು ಕೆಣಕುವ ಮತ್ತು ಮತ್ತೆ ಓದಿಸಿಕೊಳ್ಳುವ ಇಲ್ಲಿನ ಕವಿತೆಗಳಲ್ಲಿ ನನಗಿಷ್ಟವಾದ ಒಂದು ಕವಿತೆ ಹೀಗಿದೆ.

ಹನಿ
------

ಮೋಡದೊಳಗಿದ್ದಾಗ ಸಿಡಿಲ ಮಗ್ಗುಲಲ್ಲೇ ಇದ್ದ ಪುಟ್ಟ ಹನಿ
ಹೇಗೋ ಬಚಾವಾಗಿ
ಇಳಿದು ಬಂದು
ಈಗ ಈ ಕೆಸವಿನೆಲೆ ಮೇಲೆ ಕೂತಿದೆ
ಇನ್ನೂ ನಡುಗುತ್ತಿದೆ.

ಈ ಕವನಗಳಿಗೆ ಯಾವುದೇ ರೀತಿಯಲ್ಲೂ ಅನ್ಯಾಯ ಮಾಡಲು ಇಚ್ಚಿಸದಿದ್ದರೂ ಸ್ವಲ್ಪ ಹೆಚ್ಚು ಎನಿಸಬಹುದಾದರೂ ಒಂದು ಮಾತು ಸೇರಿಸುತ್ತೇನೆ. ಇದೇ ರೀತಿಯ ಅನುಭವ ನನಗೆ "ಗುಲಾಬಿ ಟಾಕೀಸ್" ಸಿನೆಮಾ ನೋಡಿದ ಮೇಲೆ ಅದರ ಬಗೆಗಿನ ಅನಂತಮೂರ್ತಿಯವರ ವಿಮರ್ಶೆ ಓದಿದ ಮೇಲೆ ... ಬಹಳ ವರ್ಷಗಳ ನಂತರ ಅನಿಸಿತ್ತು. ಆ ಸಿನೆಮಾದ ಚಿತ್ರಕಥೆಯ ಅಚ್ಚುಕಟ್ಟು, ನಿರ್ದೇಶಕರ ಬುದ್ಧಿಮತ್ತೆಯನ್ನು ನೆನೆದು.

ನನ್ನ ಪರಿಚಿತರೊಬ್ಬರು ಐಟಿಯಲ್ಲಿ ಕೆಲಸ ಮಾಡುತ್ತಿರುವ ಬಹಳ ದೇಶ ಸುತ್ತಿರುವ ಹಿರಿಯರು "mere clarity silences me" ಅಂತ ಹೇಳುತ್ತಿದ್ದರು. ಜೀವನಾನುಭವದಿಂದ ಬಂದ ಅವರ ಜ್ಞಾನದ ಮಾತಿನ ವಿನಯವನ್ನು ರಾಮು ಕವಿತೆಗಳ ಬಗ್ಗೆ ಹೇಳಬಹುದು.

ಏಕಾಂತದ ತನ್ಮಯತೆಯ ಓದನ್ನ ಈ ಕವಿತೆಗಳು ಬಯಸುತ್ತವೆ ಮತ್ತು ಕಲಿಸುತ್ತವೆ.


Monday, 13 October 2008

ಮುಸ್ಸಂಜೆಯ ಹನಿಗಳು


ದಿನವೊಂದರ ಸಂಜೆ ಐದರಲ್ಲಿ
ಆಗಸದ ತುಂಬೆಲ್ಲಾ ಮೋಡಗಳಾವರಿಸಿ
ಕಾರ್ಮೋಡವೊಂದು ಕರಗಿ
ಮುತ್ತಿನಹನಿಗಳು ಸುರಿದು
ಜಗವೊಂದು ಕ್ಷಣ ಸ್ತಬ್ದವಾಗಿರಲು
ಕರಗಿದ ಮೋಡದಂಚಿನಿಂದ ರವಿಇಣುಕಿದ
ಮುತ್ತಿನ ಮಳೆಹನಿಯ ಸಾಲು ಸಾಲೊಳಗೆ
ಹೊಳೆವ ಸೂರ್ಯನ ಬಿಸಿಲುಕೋಲೊಂದು ತೂರಿ
ತೆಳುನೀಲಿ ಬಾನಂಗಳದಲ್ಲಿ ಮೂಡಿತೊಂದು ಕಾಮನಬಿಲ್ಲು. ೧

ಇದಲೆಕ್ಕಿಸದೆ ಮೋಡ ಕರಗಿರಲು
ರವಿ ಇಣುಕುತಿದ್ದ ಧರಣಿಯತ್ತ
ಕಾಲ ಬಂದೆರಗಿ ರವಿಯ ಜಗ್ಗುತಿದ್ದ
ಪಡುವಣದಿ ಬಾನಿಳೆ ಸಂಧಿಸುವತ್ತ
ಇತ್ತ ಧರೆಯಲ್ಲಿ ಮುತ್ತಿನ ಹನಿಗಳು
ಕೆಸರಲ್ಲಿ ಕರಗಿ ಮತ್ತೆ ಒಂದಾದವು
ಮುಂಗಾರಿನ ಮೊದಲ ಮಳೆಯಲ್ಲಿ ಮಿಂದು
ಭೂತಾಯಿಯ ಹಸಿಮೈ ಕಂಪು ಸೂಸಿರಲು
ಉದ್ದೀಪನಗೊಂಡು ಉಲ್ಲಾಸದಿ ಜೀಕಿತೊಂದು ಹುಲ್ಲುಗರಿಕೆ. ೨