Sunday, 21 July 2013

ಬೆಳಗು ರಸ್ತೆ


ಹೊತ್ತು ಮೂಡುವ ಮೊದಲೆ ಎದ್ದು ಕೆಲಸಕ್ಕೆ ಹೊರಟವನಿಗೆ
ಮನೆ ಬಾಗಿಲಿಗೆ ಬೀಗ ಹಾಕಲು ಮರೆವು.
ತುಳಸಿ ಕಟ್ಟೆಯ ಮುಂದೆ ಮಲಗಿ ಬೀಳ್ಕೊಡುವ
ಮನೆಯೊಡತಿಯಿಟ್ಟ ರಂಗೋಲಿ.
ಪರಂಗಿಗಳ ಸೇವೆಗೆ ಹೊರಟವನ ನೋಡಿ
ಸಂಸ್ಕೃತಿಯ ಚಿಹ್ನೆಯೊಂದು ನಕ್ಕಂತೆ ಭಾಸ ನನಗೆ.
ಮನೆ ಗೇಟು ದಾಟಿದರೆ ಬೇರೆಯದೇ ಲೋಕ.

ಮುಖಕ್ಕಿಷ್ಟು ನೀರು ಚುಮುಕಿಸಿಕೊಂಡು ಹೊರಬಂದ
ಗಿರಾಕಿಯ ಕಾಯುತ್ತ ಅಂಗಡಿಯ ಮುಂದೆ ನಿಂತ ಕ್ಷೌರಿಕ.
ಜೋಡಿ ಪೊರಕೆಯನಿಡಿದು ಕಸಗುಡಿಸುವ
ಮಲಗಿದ್ದ ಧೂಳನೆಬ್ಬಿಸಿ ಕುಡಿದು, ನನಗೂ ಕುಡಿಸುವ
ಮುನಿಸಿಪಾಲಿಟಿಯ ಹೆಂಗಸರು.
ಪ್ರತಿ ಮನೆಯ ಮುಂದೆ ವಿಲೇವಾರಿಗೆ ಕಾಯುತ್ತಾ ಕುಳಿತ
ಹಿಂದಿನ ದಿನದ ಕಸದ ಬುಟ್ಟಿಗಳು ರಸ್ತೆಯುದ್ದಕ್ಕೂ. ನಿತ್ಯದರ್ಶನ.

ತಿಲಕನಗರ ಸ್ಲಮ್ಮಿನ ಅಡ್ಡರಸ್ತೆಯ ತಿರುವಿನಿಂದ
ಗುಟುರು ಹಾಕುತ್ತ ನುಗ್ಗಿಬರುವ ಸ್ಕೂಟರು.
ತುರ್ತುಕಾರ್ಯಕ್ಕೆ ಗೆಳೆಯರ ಸವಾರಿ.
ಒಟ್ಟೊಟ್ಟಿಗೆ ಬರುವ ಭಯ ಮತ್ತು ಸಿಟ್ಟು.
ದಡಬಡಿಸಿ ಸಾಗುವ ಮಣಾ ಮಣಾ ಸದ್ದಿನ ಲಾರಿ.
ಅಂಗಡಿಗಳ ಮುಂದೆ ಮಲಗಿರುವ ಬೀದಿನಾಯಿಗಳು.

ಮೈಮರೆತು ನಡೆಯುವ ಯುವಕನನ್ನು ಅಡ್ಡಗಟ್ಟುವ ದ್ವಿಲಿಂಗಿಗಳು.
ಚಪ್ಪಾಳೆಗೂ ಕೂಡ ಇಲ್ಲಿ ದಂಡ ತೆರಬೇಕು.
ಕಾಲುದಾರಿಯ ಸಂದಿನಲ್ಲಿರುವ ಕೊಬ್ಬರಿಯಂಗಡಿಗೆ ಪೇದೆಯ ಭೇಟಿ.
ಹುಳಿಮಾವಿಗೆ ಹೋಗಲು ಬಸ್ಸಿನ ಸಂಖ್ಯೆ ಕೇಳುವ,
ಉತ್ತರ ಸಿಗದೆ ಮೂಲೆಯಲ್ಲಿ ನಿಂತು ಬೀಡಿ ಸೇದುವ
ಹಳ್ಳಿಗ ನಿಲ್ದಾಣದಲ್ಲಿ.

ಕಂಪನಿ ಬಸ್ಸಿನ ಚಾಲಕ ನನ್ನೆದುರಿಗೆ ಬಸ್ಸು ನಿಲ್ಲಿಸುತ್ತಾನೆ.
ಬಸ್ಸು ಹತ್ತಿದರೆ ಕಿಟಕಿ ನೋಟ ಶುರು.
ಪೇದೆಯ ಕೈಲಿ ಕೊಬ್ಬರಿ, ದ್ವಿಲಿಂಗಿಗಳ ಕೈಲಿ ದುಡ್ಡು,
ಹೆಂಗಸರ ಕೈಲಿ ಪೊರಕೆ, ಹಳ್ಳಿಗನ ಕೈಲಿ ಬೀಡಿ,
ನಿತ್ಯ ನಡೆಯುವ ಬೆಳೆಗಿನ ಮಂಗಳಾರತಿ.
ನನಗೆ?, ರಸ್ತೆಗೆ?.

No comments:

ಹಳ್ಳಿಯ ಕಡೆಯ ಜನ

ಎಲ್ಲಿ ಹೋದರು ಅವರು ನಮ್ಮ ಮನೆಯ ಎತ್ತುಗಳಿಗೆ ಲಾಳಾ ಕಟ್ಟಿ ಹೊಡೆದವರು ಚಳ್ಳಾ ತೊಟ್ಟು ಬಂದವರು ಎಲ್ಲಿ ಹೋದರು ಅವರು ನಮ್ಮ ಮನೆಯ ಪಾತ್ರೆ-ಪಗಡೆಗಳಿಗೆ ಕಲಾಯಿ ಮಾಡಿ...